Wednesday 29 June 2011

ಪ್ರತಿದ್ವನಿ


ಮುಂಜಾನೆ ಮಂಜನು ಸರಿಸಿದ ಉಷೆಯು
ಎಲೆಯೊಂದರ ಮೇಲಿನ ಪುಟ್ಟ ಹನಿಯ ಮಿಂಚಿಸಿದಂತೆ,
ದೀಪವು ತನ್ನ ಕಿರಣದಿಂದ ಪ್ರತಿ ಕೋಣೆಯ ಆವರಿಸಿದಂತೆ,
ನಿನ್ನ ಆಳವಾದ ನೋಟದಿಂದ ನನ್ನ ಹೃದಯವ ಸ್ಪರ್ಶಿಸಿದ
ಆ ಮಿಂಚಿನ ಮಾಯಗಾರ ನೀನೇನಾ?

ಈ ಬದುಕಿನ ತೆರೆಯಲ್ಲಿ, ಇಲ್ಲದಿರೋ ಪ್ರೀತಿಯ ಸಂಚಿಕೆಗೆ
ನನಗೆ ತಿಳಿಯದೆ ಹೊಸ ಪುಟವ ಸೇರಿಸಿದೆ
ಎಂದೂ ಕಾಣದ ಪ್ರೀತಿಯ ಸಿಹಿಯಾತನಗೆ ಇಂದು ಸಿಲುಕಿಸಿದೆ
ಈವರೆಗೂ ನಾಕಂಡ ಪ್ರತಿ ಕನಸಲ್ಲೂ ಬಿಡದೆ  ಮೂಡಿದ್ದ
ಆ ಮುದ್ದಾದ ನಾಯಕ ನೀನೇನಾ?

ಪ್ರೇಮ ಮಹಾಕಾವ್ಯದ ಒಂದೊಂದು ಹಸಿಮುತ್ತು ಪೋಣಿಸಿ
ನನಗಾಗಿಯೆ ನೀ ಬರೆದೆ ಒಲವ ಕವನ
ನನ್ನ ಗೆಜ್ಜೆಯ ಸದ್ದನು ಹೋಲುವ ಹೊಸ ರಾಗವ ಪರಿಚಯಿಸಿ
ಎಂದು ನುಡಿಯದಿರೋ ಶ್ರುತಿಯ ಮನದಲಿ ಮೀಟಿದ
ಆ ಹೃದಯವೀಣೆಯ ಪ್ರತಿದ್ವನಿಯು ನೀನೇನಾ?

ನಿಲುಕದಿರೊ ಗಗನದ ಬಣ್ಣದಿ ನೀ ಬಿಡಿಸಿದ ಚಿತ್ತಾರವ
ಲೋಕವೆ ಕಂಡು ಮೆಚ್ಚಿದೆ, ನನ್ನ ಅಂಗೈಯ ಮದರಂಗಿಯಲ್ಲಿ
ಅಂತರಾಳದೊಳಗೆ ಅಡಗಿರುವ ದುಗುಡವ ಪ್ರೀತಿಕುಂಚದಿ ತೀಡಿ
ಖಾಲಿ ಮನಸಿನಲಿ ಬಣ್ಣಬಣ್ಣದ ರಂಗವಲ್ಲಿ ಬಿಡಿಸಿದ
ಆ ಪ್ರೇಮದ ಚಿತ್ರಕಾರ ನೀನೇನಾ?

ಮಳೆಯ ಒಂದು ಹನಿಗಾಗಿ ನವಿಲು ಪ್ರತಿ ಕ್ಷಣ ಕಾದಂತೆ
ನಿನ್ನ ಕಂಡ ವೇಳೆ ಆನು, ರೆಕ್ಕೆ ಬಿಚ್ಚಿ ಕುಣಿಯುವೆ
ಸಿಗದೆ ಹೋದರೆ ನೀನೆನಗೆ, ಈ ಹೃದಯ ಚೂರಾದೀತು!

3 comments:

  1. ಮೊದಲು, ಒಂದು ಪ್ರಶ್ನೆ. ಈ ಕವನದ ಶಬ್ದಗಳಲ್ಲಿ ಬಿಂಬಿಸಿರುವ ವ್ಯಕ್ತಿ ಕೇವಲ ನಿಮ್ಮ ಕಲ್ಪನೆಯೋ ಅಥವಾ ನಿಜವಾಗಿಯೂ ಯಾರಿಗಾದರೂ ಸಮರ್ಪಿತವೋ? :)

    ಏನಾದರು ಇರಲಿ. ಕವನ ಚೆನ್ನಾಗಿ ಮೂಡಿ ಬಂದಿದೆ. ಕೊನೆಯ ಚರಣ ಏನೋ ಮುಗಿದ ಹಾಗಿಲ್ಲವೆಂದಂತೆ ಕಂಡು ಬರುತ್ತಿದೆ. ಇದು ನಿಮ್ಮ ಶೈಲಿಯೋ ನನಗರಿಯದು.

    ಒಂದು ಸುಪ್ತ ಮನಸ್ಸಿನ ಭಾವನೆಗಳನ್ನು ಗಾಢವಾಗಿ ಶಬ್ದಗಳ ಮೂಲಕ ವ್ಯಕ್ತಪಡಿಸುವುದು ಕವನ/ಕವಿತೆಗಳಿಂದ ಮಾತ್ರ ಸಾಧ್ಯ ಎನ್ನುತ್ತಾರೆ ಬಲ್ಲವರು. ನೀವು ಇದನ್ನು ಚೆನ್ನಾಗಿ ಅರಿತಂತೆ ಕಂಡು ಬರುವುದು.

    ಇನ್ನು ಕವನ ಬಿಟ್ಟರೆ, ನಿಮ್ಮ ಬ್ಲಾಗ್ ನ theme ನಲ್ಲಿರುವ ಅಕ್ಷರಗಳ ಗಾತ್ರ ಬದಲಾಯಿಸಬಹುದು ಎಂಬ ಅನಿಸಿಕೆ. ಕೆಲವು ಅಕ್ಷರಗಳು (ತಾರೀಕು, ನಿಮ್ಮ ಬಗ್ಗೆ ವಿವರ, ಇತ್ಯಾದಿ) ಸರಿಯಾಗಿ ತೋರುತ್ತಿಲ್ಲ.

    ಮೊದಲ ಕವನದಲ್ಲಿಯೇ ಉತ್ತಮ ಪ್ರೌಢತೆ ಮೆರೆದಿರುವಿರಿ. ನಿಮ್ಮ ಕವಯತ್ರಿ ಮನಸ್ಸು ಇನ್ನು ಪಕ್ವವಾಗಲಿ ಎಂದು ಹಾರೈಸುವೆ.

    ಇಂತಿ
    ಸುನೀಲ್ ಪಡಿಯಾರ್.

    ReplyDelete
  2. ಮೊದಲ ಪ್ರಯತ್ನದಲ್ಲೇ ಇಷ್ಟೊಂದು ಉತ್ತಮ ಭಾವಪೂರ್ಣ ಸಾಲುಗಳ ಬರೆದಿರುವುದು ನನಗ ಆಶ್ಚರ್ಯ ತಂದಿದೆ.

    ನಿಮ್ಮ ಪ್ರಯತ್ನ ಈಗೆ ಮುಂದುವರಿಯಲಿ ಹಾಗೆ ನಮಗೂ ಇಂತಹ ಒಳ್ಳೆ ಕವನಗಳ ಸವಿಯುವ ಅವಕಾಶ ಸಿಗಲಿ ಎಂದು ಆಶಿಸುವ

    // ಗೌಡ

    ReplyDelete
  3. Thank you Sunil and Gowdre... :)

    ReplyDelete