Wednesday 7 December 2011

ಸವಿ ಹನಿಗವನಗಳು



ಓ ಹೃದಯವೆ!
ಒಮ್ಮೆ ಕಣ್ಣು ಮಿಂದು, 
ಕಾಣಿಸುತಿರುವ ನೋಟದ ನಿಜವ ಅರಿಯದು...  
ನನ್ನನೇ ನಾಬಿಟ್ಟು ಹೊರಟಿರುವೆ ಯಾರೊಡನೆ? 
ಹುಡುಕಲು ಹೋದರೆ
 ಮನಸು ತುಂಬ ಮಂಜು..


****************************************************

ನಾ ಕಾಣೆ ಏನದು ಭಾವನೆ??
ನೀರಿನಂತೆ ನೀನೆಣಿಸಿದ ರೂಪಧರಿಸಿ ನಿನ್ನನ್ನು  ಪ್ರೀತಿಭಾವದಿ ತಣಿಸಲೇ?
ಬೆಳಕಿನಂತೆ ನನ್ನ ಎದೆಗೂಡನ್ನು ಆವರಿಸು ಅಂತಾ ಕಾಯುತಿರಲೇ?

ನಡೆದು ಬಂದ ಯಾತ್ರಿಕನ ಹಸಿವು ನೀಗಿಸುವ ಮೊದಲ ತುತ್ತಾಗಲೇ?
ಮುಂಗಾರಿನಂತೆ ಬರಡು ಭುವಿಗೆ ಜೀವಧಾರೆ ಸುರಿಯಲೆಂತೆ ಕಾದಿರಲೇ?
ನಾ ಕಾಣೆ ಏನಿದು ಯಾತನೆ?

*****************************************************


ನಾ ಒಂದು ಶ್ರುತಿ ಇಲ್ಲದ ವೀಣೆ, 
ನಾದವೆ ಸ್ಪರ್ಶಿಸದ ತಗಡು ತಂತಿಗಳಿಂದ ಬಂಧಿ ಆಗಿರುವೆ,
ಅಂಬರ ಚಾಚಿದಷ್ಟು ನೋವನ್ನು ನನ್ನ ಕತ್ತಲೆ ಕೊಠಡಿಯಲ್ಲಿ ಬಚ್ಚಿಟ್ಟಿರುವೆ,
ಅಂಗೈ ತುದಿಯಲಿ ಲೋಕದ ನಿಗೂಢ ನಿಯಮಗಳ ಭಾರ ಹೊತ್ತಿ 
ರಾಗದ ಮಳೆಯಲಿ ಸ್ವರದೊಡನೆ ಸಾಗಲು ಕೈ ಚಾಚಿ ಕಾಯುತಿರುವೆ, 

ನನ್ನ ದೇವನ ಭಕುತಿಗೆ ಗಾನಮುಡುಪಾಗಲು ಕಾತುರದಿ ಕಾದಿರುವೆ!!!!

Wednesday 29 June 2011

ಪ್ರತಿದ್ವನಿ


ಮುಂಜಾನೆ ಮಂಜನು ಸರಿಸಿದ ಉಷೆಯು
ಎಲೆಯೊಂದರ ಮೇಲಿನ ಪುಟ್ಟ ಹನಿಯ ಮಿಂಚಿಸಿದಂತೆ,
ದೀಪವು ತನ್ನ ಕಿರಣದಿಂದ ಪ್ರತಿ ಕೋಣೆಯ ಆವರಿಸಿದಂತೆ,
ನಿನ್ನ ಆಳವಾದ ನೋಟದಿಂದ ನನ್ನ ಹೃದಯವ ಸ್ಪರ್ಶಿಸಿದ
ಆ ಮಿಂಚಿನ ಮಾಯಗಾರ ನೀನೇನಾ?

ಈ ಬದುಕಿನ ತೆರೆಯಲ್ಲಿ, ಇಲ್ಲದಿರೋ ಪ್ರೀತಿಯ ಸಂಚಿಕೆಗೆ
ನನಗೆ ತಿಳಿಯದೆ ಹೊಸ ಪುಟವ ಸೇರಿಸಿದೆ
ಎಂದೂ ಕಾಣದ ಪ್ರೀತಿಯ ಸಿಹಿಯಾತನಗೆ ಇಂದು ಸಿಲುಕಿಸಿದೆ
ಈವರೆಗೂ ನಾಕಂಡ ಪ್ರತಿ ಕನಸಲ್ಲೂ ಬಿಡದೆ  ಮೂಡಿದ್ದ
ಆ ಮುದ್ದಾದ ನಾಯಕ ನೀನೇನಾ?

ಪ್ರೇಮ ಮಹಾಕಾವ್ಯದ ಒಂದೊಂದು ಹಸಿಮುತ್ತು ಪೋಣಿಸಿ
ನನಗಾಗಿಯೆ ನೀ ಬರೆದೆ ಒಲವ ಕವನ
ನನ್ನ ಗೆಜ್ಜೆಯ ಸದ್ದನು ಹೋಲುವ ಹೊಸ ರಾಗವ ಪರಿಚಯಿಸಿ
ಎಂದು ನುಡಿಯದಿರೋ ಶ್ರುತಿಯ ಮನದಲಿ ಮೀಟಿದ
ಆ ಹೃದಯವೀಣೆಯ ಪ್ರತಿದ್ವನಿಯು ನೀನೇನಾ?

ನಿಲುಕದಿರೊ ಗಗನದ ಬಣ್ಣದಿ ನೀ ಬಿಡಿಸಿದ ಚಿತ್ತಾರವ
ಲೋಕವೆ ಕಂಡು ಮೆಚ್ಚಿದೆ, ನನ್ನ ಅಂಗೈಯ ಮದರಂಗಿಯಲ್ಲಿ
ಅಂತರಾಳದೊಳಗೆ ಅಡಗಿರುವ ದುಗುಡವ ಪ್ರೀತಿಕುಂಚದಿ ತೀಡಿ
ಖಾಲಿ ಮನಸಿನಲಿ ಬಣ್ಣಬಣ್ಣದ ರಂಗವಲ್ಲಿ ಬಿಡಿಸಿದ
ಆ ಪ್ರೇಮದ ಚಿತ್ರಕಾರ ನೀನೇನಾ?

ಮಳೆಯ ಒಂದು ಹನಿಗಾಗಿ ನವಿಲು ಪ್ರತಿ ಕ್ಷಣ ಕಾದಂತೆ
ನಿನ್ನ ಕಂಡ ವೇಳೆ ಆನು, ರೆಕ್ಕೆ ಬಿಚ್ಚಿ ಕುಣಿಯುವೆ
ಸಿಗದೆ ಹೋದರೆ ನೀನೆನಗೆ, ಈ ಹೃದಯ ಚೂರಾದೀತು!